ಗ್ಯಾಜೆಟಿಯರ್ -
ಸ್ಥಳಗಳ ಪ್ರದೇಶಗಳ, ದೇಶಗಳ ಹೆಸರುಗಳನ್ನು ಅವನ್ನು ಕುರಿತ ವಿವರಗಳನ್ನು ಒಳಗೊಂಡ ಕೋಶ (ಗ್ಯಾಜೆóಟೀರ್). ಗೆಜೆಟುಗಳಲ್ಲಿ ಅಥವಾ ವೃತ್ತಪತ್ರಿಕೆಗಳಲ್ಲಿ ಬರೆಯುವವನನ್ನು ಗ್ಯಾಜೆóಟೀರ್ ಎಂದು ಕರೆಯುವ ಪರಿಪಾಟಿ 18ನೆ ಶತಮಾನದಲ್ಲಿ ಇತ್ತು. ವೃತ್ತಪತ್ರಿಕೆಯನ್ನೂ ಈ ಹೆಸರಿನಿಂದ ಕರೆಯುತ್ತಿದ್ದದ್ದುಂಟು. ಸ್ಥಳಗಳ, ಪ್ರದೇಶಗಳ, ದೇಶಗಳ ವಿವರಣೆ, ಇತಿಹಾಸ, ಅಂಕಿ-ಅಂಶ ಮುಂತಾದವನ್ನು ಸುದೀರ್ಘವಾಗಿ ಒಳಗೊಂಡ ಕೋಶಸದೃಶ ಗ್ರಂಥಗಳನ್ನು ಭೌಗೋಳಿಕ ನಿಘಂಟು ಎಂದು ಕರೆಯುವುದುಂಟಾದರೂ ಮೇಲೆ ಹೇಳಿದೆ ಹೆಸರು ಹೆಚ್ಚು ವಾಡಿಕೆಯಲ್ಲಿದೆ. ವರ್ಣಾನುಕ್ರಮದಲ್ಲಿ ನದಿ, ಪರ್ವತ, ಗ್ರಾಮ, ನಗರ ಮುಂತಾದವುಗಳ ಬಗ್ಗೆ ಮಾಹಿತಿ ನೀಡುವ ಕೋಶವೆಂಬ ಈ ಶಬ್ದದ ಅರ್ಥ ಕ್ರಮೇಣ ವಿಸ್ತøತವಾಗಿ, ಯಾವುದಾದರೊಂದು ದೇಶದ, ಪ್ರದೇಶದ, ವಿಭಾಗದ ರಾಜಕೀಯ. ಐತಿಹಾಸಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ಔದ್ಯೋಗಿಕ ವಿಷಯಗಳ ಸಮಗ್ರ ವಿವರಗಳನ್ನು ತಿಳಿಸುವ ಗ್ರಂಥವೆಂದು ಇದು ಪ್ರಸಿದ್ಧಿ ಹೊಂದಿತು. ಯಾವುದಾರೊಂದು ಪ್ರದೇಶದ ಭೌಗೋಳಿಕ ಸೂಚಿ ಎಂಬ ಅರ್ಥದಲ್ಲಿ ಈ ಶಬ್ದವನ್ನು 1704ರಲ್ಲಿ ಲಾರೆನ್ಸ್ ಎಕಾರ್ಡ್ ಎಂಬುವನು ಬಳಸಿದ. 6ನೆಯ ಶತಮಾನದ ಆರಂಭದಲ್ಲಿ ಬಿಜಾóಂಟಿಯಮ್‍ನ ಸ್ಟೀವೆನ್ ಎಂಬಾತ ಈ ಬಗೆಯ ಕೃತಿಯನ್ನು ರಚಿಸಿದ್ದ. ಆದರೆ ದುರದೃಷ್ಟದಿಂದ ಈ ಗ್ರಂಥದ ಕೆಲವು ತುಣುಕುಗಳು ಮಾತ್ರ ದೊರೆತಿವೆ. ಈಗಿನ ಗೆಜೆಟಿಯರುಗಳಿಗೆ ಹೋಲಿಸಬಹುದಾದ ಒಂದು ಕೃತಿ ಹೊರಬಂದದ್ದು ಕ್ರಿ.ಶ. 16ನೆಯ ಶತಮಾನದಲ್ಲಿ. ಇದು ಚಾಲ್ರ್ಸ್ ಸ್ಟೀವೆನ್ಸನಿಂದ ರಚಿತವಾಗಿ ಜಿನೀವದಿಂದ ಪ್ರಕಟವಾದ ಡಿಕ್ಷನೇರಿಯಮ್ ಹಿಸ್ಟಾರಿಕೊ-ಜಿಯಾಗ್ರಫಿಕಮ್ (1565). ಇದರ ತರುವಾಯ ಫೆರೈನ ಲೆಕ್ಸಿಕನ್ ಜಿಯಾಗ್ರಫಿಕಮ್ (1627), ಬಾದ್ರಾರಾದನ ಜಿಯಾಗ್ರಫಿಯಾ ಆರ್ಡಿನೆ ಲಿಟರೇರಮ್ ಡಿಸ್‍ಪೊಸಿಟಾ (1682), ಲೇ ಮಾರ್ಟಿನೈರನ ಡಿಕ್ಷನೇರ್ ಜಿಯಾಗ್ರಫಿಕ್ ಹಿಸ್ಟಾರಿಕ್ ಎಟ್ ಕ್ರಿಟಿಕ್ (1726) ಮತ್ತು ಇವುಗಳ ಆಧಾರದ ಮೇಲೆ ರಚಿತವಾದ ಇತರ ಹಲವು ವಿಷಯ ಕೋಶಗಳು, ಜರ್ಮನ್ ಭೂಗೋಳಶಾಸ್ತ್ರಜ್ಞ ಜಿ.ಎಚ್. ಹ್ಯಾಸೆಲನ ಜಿಯಾಗ್ರಫಿಶ್ಚ್-ಸ್ಟ್ಯಾಟಿಸ್ಟಿಶ್ಚ್ ಹ್ಯಾಂಡ್‍ವೊರ್ಟರ್‍ಬಕ್ (1817) ಸಂಶೋಧನಾತ್ಮಕವಾದ, ಮುಂದಿನ ಗೆಜೆಟಿಯರುಗಳಿಗೆ ಮಾದರಿಯಾದ ಕೃತಿ. ಕೆಲವು ಮುಖ್ಯವಾದ ಇಂಗ್ಲಿಷ್ ಮತ್ತು ಅಮೆರಿಕನ್ ಗೆಜೆóಟಿಯರುಗಳೆಂದರೆ ಕ್ರಟ್‍ವೆಲನ ಯೂನಿವರ್ಸಲ್ ಗ್ಯಾಜೆóಟೀರ್ಸ್ (1808), ದಿ ಎಡಿನ್ ಬರ್ಗ್ ಗ್ಯಾಜೆóಟೀರ್ (1817-22), ಮ್ಯಾಕ್ ಕುಲಕ್‍ನ ಜಿಯಾಗ್ರಫಿಕಲ್ ಡಿಕ್ಷನರಿ (1851), ಬ್ಲಾಕಿಯ ಇಂಪೀರಿಯಲ್ ಗ್ಯಾಜೆóಟೀರ್ (1850), ಲಿಪಿನ್‍ಕಾಟ್‍ನ ಪ್ರೊನೌನ್ಸಿಂಗ್ ಗ್ಯಾಜೆóಟೀರ್ ಆಫ್ ದಿ ವಲ್ರ್ಡ್ (1855, 1911 ಮತ್ತು 1922), ಮೆರಿಯಮ್ - ವೆಬ್‍ಸ್ಟರ್‍ನ ಜಿಯಾಗ್ರಫಿಕಲ್ ಡಿಕ್ಷನರಿ (1949). ಡಿಕ್ಷನೇರ್ ಜಿಯಾಗ್ರಾಫಿಕ್ ಯೂನಿವರ್ಸಲ್ (ಫ್ರೆಂಚ್), ರಿಟರ್‍ನ ಜಿಯಾಗ್ರಾಫಿಶ್ಚ್ ಸ್ಟ್ಯಾಟಿಸ್ಟಿಕ್ (ಜರ್ಮನ್), ಗ್ಯಾರೊಲೋನ ಡಿಜಿಯೊನರಿಯೋ ಜಿಯಾಗ್ರಫಿಕೋ ಯೂನಿವರ್ಸಲೆ (ಇಟಲಿ 1898). ಮತ್ತು ಹಂಟರನ ಗ್ಯಾಜೆಟೀರ್ ಆಫ್ ಇಂಡಿಯ- ಇವು ಕೆಲವು ಗಮನಾರ್ಹ ಗೆಜೆಟಿಯರುಗಳು. ಜಾನ್‍ಸ್ಟನ್‍ನ ಡಿಕ್ಷನರಿ ಆಫ್ ಜಿಯಾಗ್ರಫಿ (1850), ವಿವಿನ್ ದ ಸೇಂಟ್ ಮಾರ್ಟಿನ್‍ನ ನೋವೆ ಡಿಕ್ಷನೈರೆ ಡೆ ಜಿಯಾಗ್ರಫಿಯೆ (1879-1900). ಲಾಂಗ್ ಮನ್ಸ್ ಗ್ಯಾಜೆಟೀರ ಆಫ್ ದಿ ವಲ್ರ್ಡ್ (1895). ಕೆಂಡೆಯ ಜಿಯಾಗ್ರಾಫಿಶ್ಚ್ ವೊರ್ಟೆರ್‍ಬಕ್ (1921), ಎವಾಲ್ಡ್ ಎಚ್. ಎ. ಬಾನ್ಸೆಯ ಲೆಕ್ಸಿಕನ್ ಡರ್ ಜಿಯಾಗ್ರಫಿಯೆ (1923), ರೇನಾಲ್ಡ್‍ನ ಕಾಂಪ್ರೆಹೆನ್ಸಿವ್ ಅಟ್ಲಾಸ್ ಮತ್ತು ಗ್ಯಾಜೆóಟೀರ್ ಆಫ್ ದಿ ವಲ್ರ್ಡ್(1925). ಮುಂತಾದವು ಇತರ ಕೆಲವು ಪ್ರಸಿದ್ಧ ಗೆಜೆóಟಿಯರುಗಳು. ಇವುಗಳಲ್ಲಿ ಅನೇಕ ಗೆಜೆóಟಿಯರುಗಳು ಹೊಸ ಆವೃತ್ತಿಗಳನ್ನು ಕಂಡಿವೆ. ಲಾಂಗಮನ್ಸ್‍ನ ಗ್ಯಾಜೆóಟೀರ್ ಆಫ್ ದಿ ವಲ್ರ್ಡ್ ಎಂಬ ಕೃತಿಯನ್ನು ಲಂಡನಿನ ಟೈಮ್ಸ್ ಪತ್ರಿಕೆ ಪಡೆದು ದಿ ಟೈಮ್ಸ್ ಗ್ಯಾಜೆಟೀರ್ ಎಂದು ಪುನಃ ಪ್ರಕಟಿಸಿತು. ಇಟಲಿಯ ನ್ಯೂಮನ್, ರಷ್ಯದ ಸಮೈನಾವ್ ಮತ್ತು ಭಾರತದಲ್ಲಿ ಹಂಟರ್ ಪ್ರಖ್ಯಾತ ಗೆಜೆಟಿಯರ್ ಲೇಖಕರಾಗಿದ್ದರು. ಎಡ್ವರ್ಡ್ ಥಾರ್ನ್‍ಟನ್ನನ ಗ್ಯಾಜೆಟೀರ್ (1844) ಮತ್ತು ವಾಲ್ಟರ್ ಹ್ಯಾಮಿಲ್ಟನನ ಈಸ್ಟ್ ಇಂಡಿಯ ಗ್ಯಾಜೆಟೀರ್ (1895) ಅವರ ಪ್ರಯತ್ನಗಳಿಂದ ಪ್ರಕಟವಾದುವು. 

ಭಾರತದಲ್ಲಿ : ಒಂದು ದೃಷ್ಟಿಯಿಂದ ಗೆಜೆಟಿಯರಿನಂಥ ಸಾಹಿತ್ಯದ ರಚನೆ ಪ್ರಾದೇಶಿಕ ವರ್ಣನೆಗಳನ್ನೊಳಗೊಂಡ ಅನೇಕ ಪುರಾಣಗಳ ಕಾಲದಿಂದಲೇ ಪ್ರಾರಂಭವಾಯಿತೆನ್ನಬಹುದು. ಒಂದು ದೇಶದ ಭೌಗೋಳಿಕ ಲಕ್ಷಣಗಳು, ಅಲ್ಲಿಯ ಜನರ ರಾಜಕೀಯ ಸಾಮಾಜಿಕ ಹಾಗೂ ಆರ್ಥಿಕ ಜೀವನ ಇವನ್ನು ಕುರಿತು ಪ್ರವಾಸಿಗಳು ನೀಡುವ ವೃತ್ತಾಂತಗಳು ಸಾಹಿತ್ಯದ ಒಂದು ಬಗೆಯೆಂದು ಸಾಕಷ್ಟು ಪ್ರಾಚೀನ ಕಾಲದಲ್ಲಿ ಪರಿಚಿತವಾಗಿವೆ. ಇವನ್ನು ಕೂಡ ಕೆಲವೊಮ್ಮೆ ಗೆಜೆಟಿಯರ್ ವರ್ಗಕ್ಕೆ ಸೇರಿಸಲಾಗಿದೆ. ಕ್ರಿ. ಪೂ. 6ನೇ ಶತಮಾನದಲ್ಲಿ ಸ್ಕೈಲಾಕ್ಸ್, ಇನ್ನೂರು ವರ್ಷಗಳ ಅನಂತರ ಮೆಗಾಸ್ತನೀಸ್-ಇವರು ಭಾರತದ ಬಗ್ಗೆ ವೃತ್ತಾಂತಗಳನ್ನು ವರದಿಮಾಡಿದರು. ಕೌಟಲ್ಯನ ಅರ್ಥಶಾಸ್ತ್ರ ಮೌರ್ಯಕಾಲೀನ ಭಾರತದ ಬಗ್ಗೆ ಭೌಗೋಳಿಕ ಮತ್ತಿತರ ವಿಷಯಗಳ ಅಂಕಿ-ಅಂಶ ಸಹಿತವಾದ ಅಮೂಲ್ಯ ವಿವರಗಳನ್ನೊದಗಿಸುತ್ತದೆ. ಆಲ್ಬೆರೂನಿಯ ಇಂಡಿಕಾ ಸೂಕ್ಷ್ಮ ಅವಲೋಕನ ಮತ್ತು ವೈಜ್ಷಾನಿಕ ವಿಶ್ಲೇಷಣೆಗಳಿಗೆ ಉದಾಹರಿಸಬಹುದಾದ ಕೃತಿ. ಅಬುಲ್ ಫಜಲನ ಐನೇ ಅಕ್ಬರಿ ವ್ಯವಸ್ಥಿತ ಸಂಶೋಧನೆ ಹಾಗೂ ಅಸಾಧಾರಣ ಪ್ರಯತ್ನಗಳ ಫಲ; ಅಕ್ಬರನರಾಜ್ಯ ಪದ್ಧತಿ, ಆಗಿನ ಕಾಲದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ, ಸೈನ್ಯ ಪರಿವೀಕ್ಷಣೆ ಮುಂತಾದ ವಿವರಗಳನ್ನು ನೀಡುವ ಗ್ರಂಥ. ಮೊಗಲ್ ಹಾಗೂ ಮರಾಠಾ ರಾಜ್ಯಗಳಲ್ಲಿ ಅಲ್ಲಲ್ಲಿಯ ಮುಖ್ಯ ಸ್ಥಳಗಳಲ್ಲಿ ಅಖ್‍ಬಾರನ್‍ವೀಸ್ ಎಂಬ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅವರು ತಮ್ಮ ಮೇಲಧಿಕಾರಿಗಳಿಗೆ ಆಗಾಗ್ಗೆ ವಿಶೇಷ ವಿವರಣೆಗಳನ್ನುಳ್ಳ ಪತ್ರಿಕೆಗಳನ್ನು ಕಳುಹಿಸುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳಿಗೆ ತಮ್ಮ ಆಡಳಿತದಲ್ಲಿದ್ದ ಪ್ರದೇಶಗಳ ಪರಿಚಯ ಮಾಡಿಕೊಡಲು ಗೆಜೆಟಿಯರ್ ರಚನೆ ಅವಶ್ಯಕವಾಯಿತು. ಭೂಗೋಳ, ಇತಿಹಾಸ, ನಿಸರ್ಗಸಂಪತ್ತು, ಉದ್ಯೋಗ, ವ್ಯಾಪಾರ, ಪಶುಪಕ್ಷಿ, ಅರಣ್ಯ, ನದೀನಾಲೆಗಳು, ಜನ, ಜಾತಿ, ಸಮೂಹ, ರೀತಿ ನೀತಿಗಳು, ಧರ್ಮ ಮತ್ತು ಧರ್ಮಭೇದಗಳು, ಸಾಂಸ್ಕ್ರತಿಕ ಜೀವನ, ಭಾಷಾವಿವರ, ಸಾಹಿತ್ಯ ಇತ್ಯಾದಿಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಗೆಜೆಟಿಯರ್ ರಚನೆ ಆರಂಭವಾಯಿತು. ಈಸ್ಟ್ ಇಂಡಿಯ ಕಂಪನಿಯ ಕಾಲದಲ್ಲೆ 1843ರಲ್ಲಿ ಮುಂಬಯಿ ಇಲಾಖೆಯಲ್ಲಿ ಅಲ್ಲಿಯ ಜಿಲ್ಲೆಗಳ ಬಗ್ಗೆ ಅಂಕಿ-ಅಂಶ ಸಹಿತವಾದ ವಿವರಗಳನ್ನು ಕೊಡುವ ಕೆಲಸ ಆರಂಭವಾಯಿತು. 1857ರಲ್ಲಿ ರಿಚರ್ಡ್ ಟೆಂಪಲ್ ಎಂಬಾತ ಮಧ್ಯ ಭಾರತದ ಜಿಲ್ಲಾ ಗೆಜೆóಟಿಯರುಗಳನ್ನು ರಚಿಸುವ ಕಾರ್ಯವನ್ನು ಕೈಗೊಂಡ. ಮುಂಬಯಿಯ ಜಿಲ್ಲಾ ಗೆಜೆóಟಿಯರ್ ನಿರ್ಮಾಣ 1874ರಲ್ಲಿ ಆರಂಭವಾಗಿ 1884ರಲ್ಲಿ ಪೂರ್ಣಗೊಂಡಿತು. ಮುಂದೆ 27 ವರ್ಷ ಇವುಗಳ ಮುದ್ರಣಕಾರ್ಯ ನಡೆಯಿತು. 1869ರಲ್ಲಿ ವಿಲಿಯಮ್ ಹಂಟರ್ ಇಂಪೀರಿಯಲ್ ಗ್ಯಾಜೆóಟೀರ್ ಆಫ್ ಇಂಡಿಯವನ್ನು ತಯಾರಿಸುವ ಬೃಹತ್ ಯೋಜನೆಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ. ಈ ಯೋಜನೆಗೆ 1871ರಲ್ಲಿ ಮಾನ್ಯತೆ ದೊರೆಯಿತು. 1881ರಲ್ಲಿ ಇದರ ಒಂಬತ್ತು ಸಂಪುಟಗಳು ಪ್ರಕಟವಾದುವು. ಇದರ ಪರಿಷ್ಕøತ ಆವೃತ್ತಿ 14 ಸಂಪುಟಗಳಲ್ಲಿ 1885-87ರಲ್ಲಿ ಹೊರಬಂತು. ಇವುಗಳಲ್ಲಿ ದಿ ಇಂಡಿಯನ್ ಎಂಪೈರ್ ಎಂಬ ಸಂಪುಟವೂ ಸೇರಿದೆ. ಇಂಪೀರಿಯಲ್ ಗ್ಯಾಜೆóಟೀರನ್ನು ಭಾರತೀಯ ಜೀವನ ಮತ್ತು ಸಂಸ್ಕøತಿಗಳ ಎಲ್ಲ ಅಂಶಗಳನ್ನೊಳಗೊಂಡ ವ್ಯಾಪಕ ಅಧ್ಯಯನಕ್ಕೆ ಅರ್ಹವಾದ, ಅಧಿಕೃತವಾದ ಗೆಜೆಟಿಯರ್ ಎಂದು ಪರಿಗಣಿಸಲಾಯಿತು. ಲಾರ್ಡ್ ಕರ್ಜನ್ ಇಂಪೀರಿಯಲ್ ಗ್ಯಾಜೆóಟೀರ್‍ಗಳ ಪುನರ್ ಮುದ್ರಣಕ್ಕೆ ಆಜ್ಞೆó ನೀಡಿದ. ಹೊಸ ವಿಷಯಗಳನ್ನು ಸೇರಿಸಿ 1904-1909ರಲ್ಲಿ 26 ಸಂಪುಟಗಳಲ್ಲಿ ಇವನ್ನು ಪ್ರಕಟಿಸಲಾಯಿತು. ಮೊದಲ 4 ಸಂಪುಟಗಳು ಹಂಟರನ ಇಂಡಿಯನ್ ಎಂಪೈರ್‍ನ ಪರಿಷ್ಕøತ ಪಾಠ. ಮುಂದಿನ 20 ಸಂಪುಟಗಳು ಅಕಾರಾದಿಯಲ್ಲಿವೆ. ಕೊನೆಯ ಎರಡು ಸಂಪುಟಗಳು ಸೂಚಿ ಹಾಗೂ ಭೂಪಟಗಳನ್ನೊಳಗೊಂಡಿವೆ. ಸ್ವಾತಂತ್ರ್ಯಾನಂತರ ಇಂಪೀರಿಯಲ್ ಗ್ಯಾಜೆóಟೀರಿನ ಎರಡನೆಯ ಆವೃತ್ತಿಯ ಪುನರ್ಮುದ್ರಣ ಹೊರಬಿದ್ದಿದೆ. ಇದನ್ನು ಪುರ್‍ಮುದ್ರಣವೆನ್ನುವುಕ್ಕಿಂತ ಸರ್ವವಿಧದಲ್ಲೂ ಪರಿಷ್ಕøತವಾದ ಹೊಸ ಆವೃತ್ತಿಯೆಂದೇ ಪರಿಗಣಿಸಬಹುದಾಗಿದೆ. ದಿ ಇಂಡಿಯನ್ ಎಂಪೈರ್ ಎಂಬ ಹಿಂದಿನ ಒಂದು ಸಂಪುಟ ಈಗ ವಿವರಣಾತ್ಮಕ, ಐತಿಹಾಸಿಕ, ಆರ್ಥಿಕ, ಆಡಳಿತ ಸಂಬಂಧಿ ಎಂದು ನಾಲ್ಕು ಸಂಪುಟಗಳಾಗಿ ಬೆಳಿದಿದೆ.

 1867ರಲ್ಲಿ ಇಂಡಿಯದ ಸ್ಟೇಟ್ ಸೆಕ್ರೆಟರಿಯ ಆಜ್ಞೆಯ ಪ್ರಕಾರ ಎಲ್ಲ ಪ್ರಾಂತ್ಯಗಳ ಗೆಜೆಟಿಯರುಗಳನ್ನು ಸಿದ್ಧಪಡಿಸುವ ಸೂಚನೆ ಬಂದದ್ದರಿಂದ 1874ರಲ್ಲಿ ಜೇಮ್ಸ್ ಕ್ಯಾಂಪ್‍ಬೆಲನ ನೇತೃತ್ವದಲ್ಲಿ ಈ ಕಾರ್ಯ ಆರಂಭವಾಗಿ 1884ರ ವರೆಗೆ ನಡೆಯಿತು. 1877-1904ರ ನಡುವೆ ಬಾಂಬೆ ಗ್ಯಾಜೆóಟೀರಿನ 33 ಸಂಪುಟಗಳು ಪ್ರಕಾಶಗೊಂಡುವು. ಇವುಗಳಲ್ಲಿ 18 ಜಿಲ್ಲೆಗಳ ಜೊತೆಗೆ ಬರೋಡ, ಕೊಲ್ಲಾಪುರ ಮುಂತಾದ ಸಂಸ್ಥಾನಗಳೂ ಸಮಾವೇಶವಾಗಿದೆ. ಇದಕ್ಕೂ ಮೊದಲು, ಕೊಲ್ಲಾಪುರದಲ್ಲಿ ರಾಜಪ್ರತಿನಿಧಿಯಾಗಿದ್ದ ಮೇಜರ್ ಗ್ರಹಾಮ್ ಕೊಲ್ಲಾಪುರ ಅಡ್ಮಿನಿಸ್ಟ್ರೇಷನ್ ರಿಪೋರ್ಟ್ ಎಂಬ ಗೆಜೆಟಿಯರನ್ನು ಸಿದ್ದಪಡಿಸಿ ಪ್ರಕಟಿಸಿದ (1843-44). ಬಹಳ ಸೊಗಸಾಗಿರುವ, ಇತರ ಗೆಜೆಟಿಯರುಗಳಿಗೆ ಮಾದರಿಯಾಗಿರುವ ಇದು ರಾಜಕಾರ್ಯನಿರ್ವಾಹಕರಿಗೆ ಬೇಕಾದ ಮಾಹಿತಿಗಳನ್ನೊದಗಿಸುತ್ತದೆ. ಬಾಂಬೆ ಗ್ಯಾಜೆóಟೀರ್ ಮಾದರಿಯನ್ನನುಸರಿಸಿ ಬೆಂಗಾಲ್ ಗ್ಯಾಜೆóಟೀರ್ ಮತ್ತು ಇಂಪೀರಿಯಲ್ ಗ್ಯಾಜೆóಟೀರ್‍ಗಳು ಸಿದ್ಧವಾದುವು. ಹಾಗೆಯೇ ಮದ್ರಾಸ್ ಗ್ಯಾಜೆóಟೀರ್ ಹಾಗೂ ಮೈಸೂರ್ ಗ್ಯಾಜೆóಟೀರ್‍ಗಳು ಪ್ರಕಟವಾದುವು. 

ವಿಶಾಲ ಕರ್ನಾಟಕವಾದ ಮೇಲೆ ಹಲವಾರು ರಾಜ್ಯಗಳಿಂದ ಭೂ ಪ್ರದೇಶಗಳು ವಿಲೀನಗೊಂಡವು. ಆ ವೇಳೆಗಾಗಲೇ ಆಯಾ ಪ್ರದೇಶಗಳಲ್ಲಿ ಗ್ಯಾಜೆಟಿಯರ್‍ಗಳು ಪ್ರಕಟಗೊಂಡಿದ್ದವು. 1870ರಲ್ಲಿ ಕೊಡಗು ಪ್ರಾಂತದ ಗ್ಯಾಜೆಟಿಯರ್‍ನ್ನು ರೆವರೆಂಡ್ ಜಿ. ರಿಚ್ಚರ್ ಅವರೂ; 1883-84ರಲ್ಲಿ ಬಿಜಾಪುರ, ಧಾರವಾಡ, ಬೆಳಗಾವಿ ಹಾಗೂ ಕೆನರ (ಉತ್ತರ ಕನ್ನಡ)ಗ್ಯಾಜೆಟಿಯರ್‍ಗಳನ್ನು ಜೇಮ್ಸ್ ಎಂ. ಕಾಂಬಲ್ ಅವರೂ; ದಕ್ಷಿಣ ಕನ್ನಡ ಜಿಲ್ಲೆಯ ಮ್ಯಾನ್ಯುಯಲ್‍ನ ಮೊದಲ ಸಂಪುಟ 1894ರಲ್ಲಿ ಜಾನ್ ಸ್ಟರ್ರೂಕ್ ಹಾಗೂ ಎರಡನೇ ಸಂಪುಟವನ್ನು 1895ರಲ್ಲಿ ಹೆರಾಲ್ಡ್ ದಿ. ಸ್ಟೂವರ್ಟ್ ಅವರೂ; ಬಳ್ಳಾರಿ ಜಿಲ್ಲೆಯ ಮ್ಯಾನ್ಯುಯಲ್‍ನ್ನು 1872ರಲ್ಲಿ ಜಾನ್ ಕೆಲ್‍ಸಾಲ್ ಹಾಗೂ ಅದರ ಪರಿಷ್ಕøತ ಆವೃತ್ತಿಯನ್ನು 1904ರಲ್ಲಿ ವಿಲಿಯಂ ಫ್ರಾನ್ಸಿಸ್ ಅವರೂ ಪ್ರಕಟಿಸಿದ್ದರು. ಅಲ್ಲದೆ ಈ ಎಲ್ಲ ಗ್ಯಾಜೆಟಿಯರ್‍ಗಳಿಗೂ ಬೇರೆ ಬೇರೆ ಸಂದರ್ಭಗಳಲ್ಲಿ ಪುರವಣೆಗಳನ್ನು ಹೊರತಂದಿದೆ. ಕಳೆದ ಶತಮಾನದ ಆದಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಪ್ರದೇಶಕ್ಕೆ ಸೇರಿದ ಬೀದರ್, ಗುಲ್ಬರ್ಗಾ, ಹಾಗೂ ರಾಯಚೂರು ಗ್ಯಾಜೆಟಿಯರ್‍ಗಳು ಪ್ರಕಟವಾದಂತೆ ತಿಳಿದುಬರುತ್ತದೆ. ಆದರೆ ಅವುಗಳ ಪುರವಣೆಗಳು ಸ್ವಾತಂತ್ರ್ಯಾನಂತರ ಪ್ರಕಟವಾಗಿದ್ದು ಲಭ್ಯವಿದೆ. ಹಿಂದೆ ಕ್ಯಾಂಬರ್ ಪ್ರಕಟಿಸಿದ ಮುಂಬಯಿ ಕರ್ನಾಟಕ ಪ್ರಾಂತದ ನಾಲ್ಕು ಗ್ಯಾಜೆಟಿಯರ್‍ಗಳನ್ನು 1. . . ರಲ್ಲಿ ವೆಂಕಟರಂಗೋಕಟ್ಟಿಯವರು ಕನ್ನಡಕ್ಕೆ ಸಂಕ್ಷಿಪ್ತಾನುವಾದ ಮಾಡಿ ಒಂದು ಸಂಪುಟದಲ್ಲಿ ಪ್ರಕಟಿಸಿದರು.

ಮೈಸೂರಿನ ಗ್ಯಾಸೆಟಿಯರ್‍ನ್ನು ಸಿದ್ಧಪಡಿಸಬೇಕೆಂಬ ವಿಚಾರ ಬಂದಿದ್ದು 1867ರಲ್ಲಿ. ಅಂದಿನ ಮೈಸೂರು ಸಂಸ್ಥಾನಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳಿಗೆ ಗ್ಯಾಜೆಟಿಯರ್‍ಗಳು ತಯಾರಾದವಾದರೂ, ಎಚ್. ವೆಲ್ಲೆಸ್ಲಿ ಸಂಪಾದಿಸಿದ ಮೈಸೂರು ಹಾಗೂ ಬಿ. ಕೃಷ್ಣಯ್ಯಂಗಾರ್ ಸಂಪಾದಿಸಿದ ಕೋಲಾರ ಜಿಲ್ಲೆಗಳ ಸಂಪುಟಗಳು ಮಾತ್ರ ಪ್ರಕಟವಾದವು. ಅಂದಿನ ವಿದ್ಯಾಧಿಕಾರಿಗಳಾಗಿದ್ದ ಬಿ.ಎಲ್. ರೈಸ್ ಅವರಿಗೆ ಗ್ಯಾಜೆಟಿಯರ್ ತಯಾರಿಸುವ ಕಾರ್ಯ ವಹಿಸಿದ್ದು ಅದರಂತೆ 1856-57ರಲ್ಲಿ ಮೂರು ಸಂಪುಟಗಳಲ್ಲಿ ಮೈಸೂರು ಹಾಗೂ ಕೊಡಗು ರಾಜ್ಯ ಗ್ಯಾಜೆಟಿಯರ್‍ಗಳನ್ನು ಹೊರತಂದರು. (ಮೈಸೂರು ರಾಜ್ಯಕ್ಕೆ ಸಂಬಂಧಿಸಿದಂತೆಟೆರಡು ಸಂಪುಟಗಳು ಹಾಗೂ ಕೊಡಗು ಕೂರ್ಗ್ ಗೆ ಸಂಬಂಧಿಸಿದಂತೆ ಒಂದು ಸಂಪುಟ) ಮತ್ತೆ ರೈಸ್ ಅವರೇ 1897ರಲ್ಲಿ ಮೈಸೂರು ರಾಜ್ಯಕ್ಕೆ ಸಂಬಂಧಿಸಿದ ಎರಡು ಗ್ಯಾಜೆಟಿಯರ್ ಸಂಪುಟಗಳನ್ನು ಪರಿಷ್ಕರಿಸಿ ಪ್ರಕಟಿಸಿದರು.. ಕೊಡಗಿಗೆ ಸಂಬಂಧಿಸಿದ ಸಂಪುಟ ಆಗ ಮರು ಮದ್ರಣವಾಗಲಿಲ್ಲ. 1877ರಲ್ಲಿ ಹಂಟರ್ ಅವರ ಸಂಪಾದಕತ್ವದಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಇಂಪೀರಿಯಲ್ ಗ್ಯಾಜೆಟಿಯರ್ ಸಂಪುಟಗಳು ಹೊರಬಂದವು. ಅವುಗಳಲ್ಲಿ ಅಂದಿನ ಮೈಸೂರು ಹಾಗೂ ಕೊಡಗು ಪ್ರಾಂತಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಬಿ. ಎಲ್. ರೈಸ್ ಅವರೇ ಪೂರೈಸಿಕೊಟ್ಟಿದ್ದು ನಂತರ 1909ರ ಸುಮಾರಿನಲ್ಲಿ ಅವುಗಳನ್ನು ಸಂಗ್ರಹಿಸಿ `ಪ್ರೊವಿಂಡೆಯಲ್ ಗ್ಯಾಜೆಟಿಯರ್ ಮಾಲಿಕೆಯಲ್ಲಿ ಪುಸ್ತರೂಪದಲ್ಲಿ ಪ್ರಕಟಿಸಿದರು.

1911ರ ಜನಗಣತಿಯ ಸಂಬಂಧದಲ್ಲಿ ಮೈಸೂರ್ ಗ್ಯಾಜೆóಟಿರಿನ ಹೊಸ ಆವೃತ್ತಿಯನ್ನು ಸಿದ್ಧಪಡಿಸಬೇಕೆಂದು ಅಂದಿನ ಮೈಸೂರು ಸರ್ಕಾರ ನಿರ್ಣಯಿಸಿ, 1914ರಲ್ಲಿ ಈ ಕಾರ್ಯವನ್ನು ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಆರ್. ನರಸಿಂಹಾಚಾರ್ಯರಿಗೆ ವಹಿಸಿತು. ಅವರ ಅನಂತರ ವಿ.ಆರ್. ತ್ಯಾಗರಾಜ ಅಯ್ಯರ್ ಈ ಕಾರ್ಯವನ್ನು ವಹಿಸಿಕೊಂಡರು. 1924ರಲ್ಲಿ ಸಿ. ಹಯವದನ ರಾಯರನ್ನು ಇದರ ಸಂಪಾದಕರನ್ನಾಗಿ ನೇಮಿಸಲಾಯಿತು. ಮೈಸೂರ್ ಗ್ಯಾಜೆóಟೀರಿನ ಹೊಸ ಆವೃತ್ತಿ ಏಳು ಸಂಪುಟಗಳಲ್ಲಿ 1926-27ರಲ್ಲಿ ಹೊರಬಂತು. ಹಿಂದಿನ ಮೊದಲ ಸಂಪುಟ ಈಗ ವಿವರಣಾತ್ಮಕ, ಐತಿಹಾಸಿಕ, ಆರ್ಥಿಕ, ಆಡಳಿತ ಎಂದು ನಾಲ್ಕು ಸಂಪುಟಗಳಾಗಿ ಬೆಳೆಯಿತು. ಎರಡು ಸಂಪುಟಗಳು ಮೈಸೂರು ಸಂಸ್ಥಾನದ ಅಂದಿನ ಜಿಲ್ಲೆಗಳಿಗೆ ಸಂಬಂಧಿಸಿದ್ದು. 

ಸ್ವಾತಂತ್ರ್ಯಾನಂತರ ಅನೇಕ ಸಂಸ್ಥಾನಗಳ ವಿಲೀನೀಕರಣ, ರಾಜ್ಯ ಪುನರ್ವಿಂಗಡಣೆ ಇತ್ಯಾದಿಗಳಿಂದಾಗಿ ಹೊಸ ಗೆಜೆóಟಿಯರುಗಳ ರಚನೆಯ ಅವಶ್ಯಕತೆಯುಂಟಾಯಿತು. ಇದಕ್ಕಾಗಿ ಕೇಂದ್ರ ಸರ್ಕಾರ `ಭಾರತೀಯ ಗ್ಯಾಜೆಟಿಯರ್‍ಗಳ ಇಲಾಖೆಯೊಂದನ್ನು ಆಯೋಜಿಸಿತು ಹಾಗೂ ಎಲ್ಲ ರಾಜ್ಯಗಳು ಪ್ರತ್ಯೇಕವಾಗಿ ಇಲ್ಲವೆ ರಾಜ್ಯ ಪುರಾತತ್ವ, ರಾಜ್ಯ ಪತ್ರಾಗಾರ ಅಥವ ರಾಜ್ಯ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಗಳಲ್ಲಿ ಆಯಾ ರಾಜ್ಯದ ಜಿಲ್ಲಾವಾರು ಗ್ಯಾಜೆಟಿಯರ್‍ಗಳನ್ನು ಸಿದ್ಧಪಡಿಸಲು ವಿಭಾಗವೊಂದನ್ನು ತೆರೆಯಲಾಯಿತು. ಆದ್ದರಿಂದ, ಇದಕ್ಕಾಗಿ ರಾಜ್ಯಪ್ರತಿನಿಧಿಗಳ ಗೋಷ್ಠಿಯೊಂದನ್ನು 1955ರಲ್ಲಿ ಕರೆಯಲಾಯಿತು. ಮುಂಬಯಿ ರಾಜ್ಯದಲ್ಲಿ ಆ ಮೊದಲೆ (1949) ಈ ಕಾರ್ಯ ಆರಂಭವಾಗಿತ್ತು. ಬ್ರಿಟಿಷರ ಕಾಲದ ಗ್ಯಾಜೆಟಿಯರುಗಳು ಅವರ ಅಧಿಕಾರಿಗಳಿಗೆ ಉಪಯುಕ್ತವಾಗುವಂತೆ ರಚಿತವಾಗಿದ್ದುವು. ಆದರೆ ಹೊಸ ಗೆಜೆಟಿಯರುಗಳ ತಯಾರಕರು ಯಾವುದೇ ಬಗೆಯ ಪೂರ್ವಾಗ್ರಹಪೀಡಿತರಾಗದೆ ವಸ್ತುನಿಷ್ಠವಾಗಿ ವಿಷಯಗಳನ್ನು ನಿರೂಪಿಸುವ, ವಾದಗ್ರಸ್ತ ವಿಷಯಗಳ ಚರ್ಚೆಗೆ ಇಳಿಯದೆ ಅವಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ವಾಚಕರಿಗೆ ಒದಗಿಸುವ ನಿಯಮವನ್ನು ಪಾಲಿಸಿಕೊಂಡು ಬಂದರು. ಅಂದಿನ ಮತ್ತು ಈಗಿನ ಅವಶ್ಯಕತೆಗಳನ್ನು ಲಕ್ಷಿಸಿ ಹೊಸ ಹೊಸ ವಿಷಯಗಳನ್ನು ಸೇರಿಸುವ ನಿಯಮಾವಳಿಯನ್ನು ಹಾಕಿಕೊಳ್ಳಲಾಯಿತು. ಜಿಲ್ಲಾ ಗ್ಯಾಜೆಟಿಯರುಗಳಲ್ಲಿ ಆಯಾ ಜಿಲ್ಲೆಗಳ ವಾಸ್ತವಿಕ ಚಿತ್ರ ಮೂಡಿಬರುವಂತೆ, ಅವನ್ನು ರೂಪಿಸಲು ನಿಶ್ಚಯಿಸಲಾಯಿತು. ವಿವಿಧ ರಾಜ್ಯಗಳಲ್ಲಿ ರೂಢಿಯಲ್ಲಿರುವ ವಿಷಯಗಳು ಪರಸ್ಪರ ಪರಿಚಯವಾಗುವಂತೆ, ಅವುಗಳ ಬಗ್ಗೆ ಇರುವ ತಪ್ಪು ತಿಳಿವಳಿಕೆಗಳು ದೂರವಾಗುವಂತೆ ರಾಷ್ಟ್ರೀಯ ಏಕತಾಭಾವ ಜನತೆಯಲ್ಲಿ ಮೂಡಿ ಬರುವಂತೆ ಭಾರತೀಯ ಗೆಜೆಟಿಯರುಗಳನ್ನು ರಚಿಸಬೇಕೆಂಬ ಸೂಚನೆಗಳನ್ನು ಸ್ವೀಕರಿಸಲಾಯಿತು ಹಾಗೂ ಅಧ್ಯಾಯಗಳ ರಚನೆಯಲ್ಲಿ ಎಲ್ಲ ರಾಜ್ಯಗಳು ಏಕರೂಪತೆ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು.

ಜಿಲ್ಲಾ ಗ್ಯಾಜೆಟಿಯರುಗಳ ರಚನೆಯಲ್ಲಿ ಹತ್ತೊಂಬತ್ತು ಅಧ್ಯಾಯಗಳನ್ನು ಕೊಡಲು ನಿಶ್ಚಯಿಸಲಾಯಿತು. ಅವುಗಳ ವಿವರ ಹೀಗಿದೆ : 1 ಸಾಮಾನ್ಯ ಭೂವಿವರಣೆ ನದಿಗಳು, ನೀರಾವರಿ, ಖನಿಜ, ಪಶುಪಕ್ಷಿ, ವನಸ್ಪತಿ ಮತ್ತು ವಾಯುಗುಣ, 2. ಇತಿಹಾಸ, 3. ಜನ, ಜೀವನ, ಭಾಷೆಗಳು, ಇತ್ಯಾದಿ, 4. ಕೃಷಿ ಮತ್ತು ನೀರಾವರಿ, ಅರಣ್ಯ ಇತ್ಯಾದಿ, 5. ಕೈಗಾರಿಕೆಗಳು, 6. ಬ್ಯಾಂಕಿಂಗ್, ವಾಣಿಜ್ಯ, 7. ಸಾರಿಗೆ, ಸಂಪರ್ಕ, 8. ಇತರ ಉದ್ಯೋಗಗಳು, 9. ಆರ್ಥಿಕ ಪ್ರವೃತ್ತಿಗಳು, 10. ಸಾಮಾನ್ಯ ಆಡಳಿತ, 11. ಕಂದಾಯ ಆಡಳಿತ, 12. ಕಾನೂನು ಮತ್ತು ಶಿಸ್ತು, ನ್ಯಾಯಪಾಲನೆ, 13. ಇತರ ಇಲಾಖೆಗಳು, 14. ಸ್ಥಳೀಯ ಆಡಳಿತ, 15. ಶಿಕ್ಷಣ ಮತ್ತು ಸಂಸ್ಕøತಿ, 16. ವೈದ್ಯ, ಸಾರ್ವಜನಿಕ ಆರೋಗ್ಯ, 17. ಸಾರ್ವಜನಿಕ ಸೌಲಭ್ಯಗಳು, 18. ಸಾರ್ವಜನಿಕ ಮತ್ತು ಸ್ವಯಂಸೇವಕ ಸಾಮಾಜಿಕ ಸಂಸ್ಥೆಗಳು, ಇತ್ಯಾದಿ, 19. ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳು, ವ್ಯಾಪಾರ ಕೇಂದ್ರಗಳು, ಇತ್ಯಾದಿ. ಹೀಗೆ ಜಿಲ್ಲಾ ಗ್ಯಾಜೆಟಿಯರುಗಳು ಪ್ರತಿಯೊಂದು ಜಿಲ್ಲೆಯೊಳಗಿರುವ ಹಳ್ಳಿ ಮತ್ತು ಊರುಗಳ ಐತಿಹಾಸಿಕ ಹಿನ್ನೆಲೆ ಹಾಗೂ ಸಮಕಾಲೀನ ವಿವರಗಳನ್ನು ನೀಡುತ್ತವೆ.

ಕರ್ನಾಟಕಕ್ಕೆ ಪ್ರತ್ಯೇಕವಾಗಿ ಗ್ಯಾಜೆಟಿಯರ್ ಇಲಾಖೆ ಆರಂಭಗೊಂಡಿದ್ದು ಹಲವಾರು ಸಚಿವಾಲಯಗಳ ಆಡಳಿತಯಲ್ಲಿದ್ದು ಪ್ರಸ್ತುತ ಕನ್ನಡ ಮತ್ತು ಸಂಸ್ಕøತಿ ಸಚಿವಲಯದ ಒಂದು ವಿಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ. 19. .ರಲ್ಲಿ ಇಲಾಖೆ ಆರಂಭವಾಗುವ ವೇಳೆಗೆ ಧಾರವಾಡ ಜಿಲ್ಲಾ ಗ್ಯಾಜೆಟಿಯರ್‍ನ್ನು ಮಹಾರಾಷ್ಟ್ರ ಸರ್ಕಾರವೇ ಪ್ರಕಟಿಸಿತ್ತು. ನಂತರ 1990ರ ವೇಳೆಗೆ ರಾಜ್ಯದ ಅಂದಿನ ಇಪ್ಪತ್ತೊಂದು ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಆಂಗ್ಲ ಭಾಷೆಯಲ್ಲಿ ಗ್ಯಾಜೆಟಿಯರ್ ಸಂಪುಟಗಳನ್ನು ಹೊರತರಲಾಯಿತು. ಅಲ್ಲದೆ ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ 1982-83ರಲ್ಲಿ ಎರಡು ಭಾಗಗಳಲ್ಲಿ ಆಂಗ್ಲ ಭಾಷೆಯಲ್ಲಿಯೂ, ಅದರ ಕನ್ನಡಾನುವಾದವನ್ನು ಮೂರು ಸಂಪುಟಗಳಲ್ಲಿ 1984-86ರ ಅಭಿವೃದ್ಧಿಯಲ್ಲಿಯೂ ಪ್ರಕಟಿಸಲಾಯಿತು. ಹತ್ತು ವರ್ಷಗಳ ನಂತರ 1994ರಲ್ಲಿ ಆಂಗ್ಲ ಹಾಗೂ 1996ರಲ್ಲಿ ಕನ್ನಡದಲ್ಲಿ ರಾಜ್ಯ ಗ್ಯಾಜೆಟಿಯರ್‍ಗಳ ಪುರವಣೆಗಳನ್ನು ಮುದ್ರಿಸಲಾಯಿತು. ಈ ಮೊದಲೇ ಕೇಂದ್ರ ಗ್ಯಾಜೆಟಿಯರ್ ಇಲಾಖೆ ಸ್ಥಗಿತಗೊಂಡಿದ್ದು ರಾಜ್ಯಸರ್ಕಾರವೇ ಕನ್ನಡ ಭಾಷೆಯಲ್ಲಿ ಪರಿಷ್ಕøತ ಗ್ಯಾಜೆಟಿಯರ್‍ಗಳನ್ನು ಹೊರತರಲು ಉದ್ದೇಶಿಸಿತು. ಅದರಂತೆ ಕೊಡಗು, ಧಾರವಾಡ, ಗುಲ್ಬರ್ಗ, ಬಿಜಾಪುರ, ಮಂಡ್ಯ ಹಾಗೂ ಕೋಲಾರ ಜಿಲ್ಲಾ ಗ್ಯಾಜೆಟಿಯರ್‍ಗಳನ್ನು 1992-2005ರ ಅವಧಿಯಲ್ಲಿ ಹೊರತರಲಾಯಿತು. ಇವುಗಳ ಆಂಗ್ಲ ಆವೃತ್ತಿಯನ್ನು ತರುವ ಯೋಜನೆಯಲ್ಲಿ 1993-2004ರ ಅವಧಿಯಲ್ಲಿ ಕೊಡಗು, ಧಾರವಾಡ ಹಾಗೂ ಗುಲ್ಬಗ್ ಜಿಲ್ಲೆಯ ಅನುವಾದಿತ ಆವೃತ್ತಿ ಪ್ರಕಟವಾಗಿದೆ. ಪರಿಷ್ಕøತ ಗ್ಯಾಜೆಟಿಯರ್‍ಗಳಲ್ಲಿ ಕೆಲವು ಅಧ್ಯಾಯಗಳನ್ನು ಸಂಯೋಜಿಸಿ, ಸಂಖ್ಯೆಯಲ್ಲಿ ಕಡಿತಗೊಳಿಸಲಾಗಿದೆ.

ಈ ಮಧ್ಯೆ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಉಪಯೋಗವಾಗುವಂತೆ ರಾಜ್ಯ ಗ್ಯಾಜೆಟಿಯರ್‍ಗಳ ರೂಪದಲ್ಲಿಯೇ `ಕರ್ನಾಟಕ ಕೈಪಿಡಿ' ಗಳನ್ನು ಪ್ರಕಟಿಸಲಾಗಿದೆ. ಮೊದಲಿಗೆ 1996ರಲ್ಲಿ `ಹ್ಯಾಂಡ್ ಬುಕ್ ಆಫ್ ಕರ್ನಾಟಕ ಆಂಗ್ಲ ಆವೃತ್ತಿ ಹೊರಬಂದಿದ್ದು 2001ರಲ್ಲಿ ಹಾಗೂ 2005ರಲ್ಲಿ ಆಯಾ ವರ್ಷಗಳವರೆಗೆ ಅಧಿಕೃತಗೊಳಿಸಿ ಎರಡು ಬಾರಿ ಪುನರ್‍ಮುದ್ರಿಸಲಾಯಿತು. 1996ರಲ್ಲಿಯೇ `ಕರ್ನಾಟಕ ಕೈಪಿಡಿ'ಯ ಕನ್ನಡ ಅವತರಣಿಕೆ ಪ್ರಕಟಿಸಲಾಯಿತು.

ಗ್ಯಾಜೆಟಿಯರ್ ಇಲಾಖೆಯ ಇನ್ನೊಂದು ಯೋಜನೆಯೆಂದರೆ ಸ್ವಾತಂತ್ರ್ಯಪೂರ್ವದ ಆದರೆ ಅಲಭ್ಯ ಗ್ಯಾಜೆಟಿಯರ್‍ಗಳ ಪುನರ್ ಮುದ್ರಣಯೋಜನೆ. ಇದರಡಿಯಲ್ಲಿ ಕ್ಯಾಂಬಲ್‍ರವರ ಬಿಜಾಪುರ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಗ್ಯಾಜೆಟಿಯರ್‍ಗಳು, ಸ್ಟರ್ರೊಕ್ ಹಾಗೂ ಸ್ಟುವರ್ಟ್ ಅವರ ದಕ್ಷಿಣ ಕನ್ನಡ ಜಿಲ್ಲಾ ಮ್ಯಾಮ್ಯುಯಲ್‍ಗಳು, ಕೆಲ್‍ಸಾಲ್ ಹಾಗೂ ಫ್ರಾನ್ಸಿಸ್ ಅವರ ಬಳ್ಳಾರಿ ಜಿಲ್ಲಾ ಗ್ಯಾಜೆಟಿಯರ್‍ಗಳು ಹಾಗೂ ಬಿ. ಎಲ್ ರೈಸ್ ಅವರ ಮೈಸೂರು ಹಾಗೂ ಕೊಡಗಿಗೆ ಸಂಬಂಧಿಸಿದ ಮೂರು ಸಂಪುಟಗಳ ಗ್ಯಾಜೆಟಿಯರ್‍ಗಳೂ ಪುನರ್‍ಮುದ್ರಣಗೊಂಡಿದ್ದು ಸಂಶೋಧಕರಿಗೆ ಇತಿಹಾಸಕಾರರಿಗೆ ಉಪಯುಕ್ತ ಆಕರ ಗ್ರಂಥಗಳಾಗಿವೆ. ನೂರು ವರ್ಷಗಳಿಗೂ ಹಿಂದೆ ಪ್ರಕಟವಾಗಿದ್ದ ಇವು ತೀರ ಶಿಥಿಲಾವಸ್ಥೆಯಲ್ಲಿದ್ದು ಸುಲಭವಾಗಿ ನೋಡಲೂ ದೊರೆಯುತ್ತಿರಲಿಲ್ಲವಾಗಿದ್ದು, ಗ್ಯಾಜೆಟಿಯರ್ ಇಲಾಖೆಯಿಂದ ಪುನರ್‍ಮುದ್ರಿತವಾಗಿದ್ದು ಶ್ಲಾಘನೀಯ ಕಾರ್ಯವಾಗಿದೆ.

ಗ್ಯಾಜೆಟಿಯರ್ ಇಲಾಖೆಯ ಇನ್ನೊಂದು ಮಹತ್ವದ ಕಾರ್ಯವೆಂದರೆ ಈ ಪ್ರಕಟವಾದ ಎಲ್ಲ ಗ್ಯಾಜೆಟಿಯರ್‍ಗಳನ್ನು ಸಿ.ಡಿ. ಅವತರಣಿಕೆಯಾಗಿ ರೂಪುಗೊಳಿಸಿ ವೆಬ್‍ಸೈಟ್‍ನಲ್ಲಿ ಅಳವಡಿಸಿ, ದರ್ಶಕರಿಗೆ ಉಚಿತವಾಗಿ ಪಡೆಯಲು (ಡೆನ್‍ಲೋಡ್ ಹಾಗೂ ಮುದ್ರಣ ಸೌಲಭ್ಯ) ಅವಕಾಶ ಕಲ್ಪಿಸಲಾಗಿದೆ. 2003ರಲ್ಲಿ ಇಂಪೀರಿಯಲ್ ಗ್ಯಾಜೆಟಿಯರ್ ಸೇರಿದಂತೆ ಸುಮಾರು ಎಂಬತ್ತು ಗ್ಯಾಜೆಟಿಯರ್‍ಗಳನ್ನು ಒಂಬತ್ತು ಸಿ.ಡಿ. ಗಳಲ್ಲಿ ಅಡಕಗೊಳಿಸಿ ಹೊರತರಲಾಯಿತು. 2005ರಲ್ಲಿ ಮತ್ತೆ ಸಿ.ಡಿ.ಗಳ ಪುನರ್ ಮುದ್ರಣ ಮಾಡಲಾಯಿತು. ಉಳಿದ ಪ್ರಕಟಿತ ಗ್ಯಾಜೆಟಿಯರ್‍ಗಳಂತೆ ಸಿ.ಡಿ ಅವತರಣಿಕೆಗಳನ್ನೂ ಮಾರಾಟಕ್ಕೆ ಇರಿಸಲಾಗಿದೆ. ಕಿಯೋಕ್ಸ್ ಸ್ಪರ್ಷ ಪರದೆಯಲ್ಲಿಯೂ ಸಿ.ಡಿ. ಗಳನ್ನು ಅಳವಡಿಸಿದ್ದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಹಾಗೂ ಧಾರವಾಡ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದಲ್ಲಿ ಕಿಯೋಕ್ಸ್ ಯಂತ್ರೋಪಕರಣಗಳನ್ನು ಇರಿಸಲಾಗಿದೆ. 2001ರಲ್ಲಿ ಕರ್ನಾಟಕ ರಾಜ್ಯ ಗ್ಯಾಜೆಟಿಯರ್ ಇಲಾಖೆಯ ವತಿಯಿಂದ ಅಖಿಲ ಭಾರತ ಮಟ್ಟದಲ್ಲಿ ಎಲ್ಲ ರಾಜ್ಯಗಳ ಗ್ಯಾಜೆಟಿಯರ್ ಮುಖ್ಯ ಸಂಪಾದಕರುಗಳನ್ನು ಆಹ್ವಾನಿಸಿ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು.
 (ಎಚ್.ಎಂ.ಎನ್.ಆರ್.ಬಿ.ವಿ.ವಿ.ವೈ)
ಪರಿಷ್ಕರಣೆ : ಅ ಲ ನರಸಿಂಹನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ